ಬೆಸೆಮರ್, ಹೆನ್ರಿ 		
1813-98. ಇಂಗ್ಲೆಂಡಿನ ಲೋಹವಿಜ್ಞಾನಿ. ಜನನ 19-1-1813, ಮರಣ 15-3-1898. ಈತನಿಗೆ ಕ್ರಮಬದ್ಧ ಶಿಕ್ಷಣ ದೊರೆಯಲಿಲ್ಲ. ಆದರೆ ಬಲವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಕ್ರಿಮಿಯನ್ ಯುದ್ಧ ಆಗುತ್ತಿದ್ದಾಗ ಫಿರಂಗಿ ರಚನೆಯನ್ನು ಸುಧಾರಿಸುವುದರಲ್ಲಿ ನಿರತನಾಗಿದ್ದ. ಫಿರಂಗಿ ನಿರ್ಮಾಣಕ್ಕೆ ಉತ್ತಮ ಕಬ್ಬಿಣ ಪ್ರಾಥಮಿಕ ಅಗತ್ಯ ಎಂಬುದನ್ನು ಕಂಡುಕೊಂಡ. ಈ ದಿಶೆಯಲ್ಲಿ ಪ್ರಯೋಗ ಮುಂದುವರಿಸಿ ಎರಡು ವರ್ಷಗಳ ತರುವಾಯ. ಈಗ ಆತನ ಹೆಸರಿನಿಂದಲೇ ಪ್ರಸಿದ್ಧವಾಗಿರುವ ಬೆಸೆಮರ್ ಪ್ರಕ್ರಿಯೆಯಲ್ಲಿ ಅಡಕವಾಗಿರುವ ಮೂಲಭೂತ ತತ್ತ್ವವನ್ನು ಆವಿಷ್ಕರಿಸಿದ. 1865ರಲ್ಲಿ ಈತ ಚೆಲ್‍ಟನ್‍ಹಾಮ್‍ನಲ್ಲಿಯ ಬ್ರಿಟಿಷ್ ಸಂಸ್ಥೆಯೊಂದರಲ್ಲಿ ಇಂಧನವಿಲ್ಲದೆ ಕಬ್ಬಿಣದ ತಯಾರಿಕೆ ಎಂಬ ಒಂದು ಪ್ರೌಢ ಪ್ರಬಂಧ ಮಂಡಿಸಿದ ಮತ್ತು ಈ ತಯಾರಿಕೆಯನ್ನು ಆಗಗೊಳಿಸುವ ಪರಿವರ್ತಕವನ್ನು ನಿರ್ಮಿಸಿದ. ಮುಂದೆ ಷೆಫೀಲ್ಡಿನಲ್ಲಿ ಬೆಸೆಮರ್ ಸ್ಟೀಲ್‍ವಕ್ರ್ಸ್ ಎಂಬ ಕಾರ್ಖಾನೆಯನ್ನೂ ಸ್ಥಾಪಿಸಿದ. ಇದು 1857ರಲ್ಲಿ ಕೆಲಸ ಮಾಡಲು ಪ್ರಾರಂಭಿಸಿತು. ಇಲ್ಲಿ ಉತ್ಪಾದಿಸಿದ ಕಬ್ಬಿಣವನ್ನು ತನ್ನ ಪ್ರತಿಸ್ಪರ್ಧಿಗಳಿಗಿಂತಲೂ ಅಗ್ಗವಾಗಿ ಮಾರತೊಡಗಿದ. 1857ರಲ್ಲಿ ಬೆಸೆಮರ್ ಪ್ರಕ್ರಿಯೆಗೆ ಅಮೆರಿಕದಲ್ಲಿ ಏಕಸ್ವಾಮ್ಯದ ಸನ್ನದು ದೊರೆಯಿತು. ಆದರೆ ಈತನಿಗೆ ಸ್ವಾಮ್ಯದ ಹಕ್ಕು ತನಗಿಂತ ಮುಂದೆ ದೊರೆಯಿತೆಂದು ವಿಲಿಯಮ್ ಕೆಲ್ಲಿ ನ್ಯಾಯಾಲಯದಲ್ಲಿ ವ್ಯಾಜ್ಯಹೂಡಿದ. ಇದರ ಫಲವಾಗಿ ಅಂತ್ಯದಲ್ಲಿ ಎರಡೂ ಕಂಪನಿಗಳೂ ಒಂದಾಗಿ ಬೆಸುಗೆಗೊಂಡವು. 

	ಬೆಸೆಮರ್ ಪ್ರಕ್ರಿಯೆಗೆ ಅನ್ವಯಿಸುವ ತತ್ತ್ವ ಹೀಗಿದೆ: ಕಾಸಿ ದ್ರವರೂಪಕ್ಕೆ ತಂದ ಕಬ್ಬಿಣದ ಮೂಲಕ ಗಾಳಿಯನ್ನು ಬಿರುಸಾಗಿ ಊದಿದಾಗ ಕಬ್ಬಿಣದೊಡನೆ ಬೆರಕೆಯಾಗಿರುವ ಇತರ ಪದಾರ್ಥಗಳು ಆಕ್ಸಿಜನ್ನಿನೊಡನೆ ಕಲೆತು ಸಂಯೋಜಿಸುತ್ತವೆ. ಆಗ ಅವುಗಳ ಆಕ್ಸೈಡ್ ಉಂಟಾಗಿ ಅವು ಶುದ್ಧ ಕಬ್ಬಿಣದಿಂದ ಬೇರೆಯಾಗುತ್ತದೆ. ಈ ಪ್ರಕ್ರಿಯೆಯಿಂದ ಅತ್ಯುತ್ತಮವಾದ ಪರಿಣಾಮ ಪಡೆಯಲು 15 ಅಥವಾ 20 ಟನ್ ದ್ರವ ಕಬ್ಬಿಣ ಹಿಡಿಯಬಲ್ಲಷ್ಟು ದೊಡ್ಡ ಪಾತ್ರೆ ಬೇಕು. ಅಲ್ಲದೆ ಅದರ ಒಳಗಡೆಗೆ ಸಿಲಿಕಾ, ಜೇಡಿಮಣ್ಣು ಅಥವಾ ಡಾಲಮೈಟಿನ ಒಂದು ತೆಳುವಾದ ಲೇಪನ ಕೊಟ್ಟಿರಬೇಕು. ಈ ತೆರನಾದ ಪಾತ್ರೆಗೆ ಬೆಸೆಮರ್ ಪರಿವರ್ತಕ ಎಂದು ಹೆಸರು. ಪಾತ್ರೆ ಮೊಟ್ಟೆಯಾಕಾರದಲ್ಲಿದ್ದರೆ ಮತ್ತಷ್ಟು ಅನುಕೂಲ. 
(ಸಿ.ಕೆ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ